ಕುಂದಾಪ್ರ ಡಾಟ್ ಕಾಂ’ ಎಂಬ ಕನಸಿಗೆ ಜೀವ ತುಂಬಿ 8 ವರ್ಷ ಕಳೆಯಿತು


  • 2012ರಲ್ಲಿ ಅಂತಹದ್ದೊಂದು ಕನಸು ಹುಟ್ಟಿಕೊಂಡಿತ್ತು. ನೋಡನೋಡುತ್ತಿದ್ದಂತೆ ಕಾರ್ಯರೂಪಕ್ಕೂ ಬಂತು. ಅಂದುಕೊಂಡಂತೆಯೇ ನಡೆಯಿತು. ಈ 8 ವರ್ಷಗಳಲ್ಲಿ ನಮ್ಮ ಜೊತೆಯಾದ, ಮಾರ್ಗದರ್ಶನವನ್ನಿತ್ತ, ಪ್ರೋತ್ಸಾಹಿಸಿದ, ಬೆಳೆಸಿದ ಕೈಗಳು ಸಾವಿರಾರು. ಅವರೆಲ್ಲರಿಗೂ ಮನತುಂಬಿದ ಕೃತಜ್ಞತೆಗಳು. ಅದೇ ಪ್ರೀತಿ ಜಾರಿಯಲ್ಲಿರಲಿ.


ಬಹುಪಾಲು ಗ್ರಾಮೀಣ ಭಾಗವನ್ನೇ ಹೊಂದಿರುವ ಕುಂದಾಪುರ ಹಾಗೂ ಈಗಿನ ಬೈಂದೂರು ತಾಲೂಕನ್ನು ಕೇಂದ್ರವಾಗಿರಿಸಿಕೊಂಡು ಆರಂಭಿಸಿದ ‘ಕುಂದಾಪ್ರ ಡಾಟ್ ಕಾಂ‘ ಸುದ್ದಿತಾಣ, ಇಂದಿನ ತನಕವೂ ನಿರಂತರವಾಗಿ ನಡೆದುಬಂದಿದೆ. ಎಲ್ಲಾ ಅಡೆತಡೆಗಳ ನಡುವೆಯೂ ತನ್ನ ಅಗ್ರಪಂಕ್ತಿಯನ್ನು ಉಳಿಸಿಕೊಂಡಿದೆ.

ಇಲ್ಲಿಯ ತನಕ ಇದರ ಬಗ್ಗೆ ನಮಗೆ ನಾವೇ ಬೆನ್ನು ತಟ್ಟಿಕೊಂಡಿಲ್ಲ. ತಮಟೆ ಬಾರಿಸಿಕೊಂಡಿಲ್ಲ. ಈಗ ಒಂದಿಷ್ಟನ್ನು ಹೇಳಲೇಬೇಕು ಅಂದೆನಿಸಿತು. ಕುಂದಾಪ್ರ ಡಾಟ್ ಕಾಂನಲ್ಲಿ ಪ್ರಕಟಗೊಂಡ ಯಾವುದೋ ಸುದ್ದಿ, ವರದಿಗಳು ಒಂದಿಷ್ಟು ಮನಸ್ಸುಗಳನ್ನು ತಲುಪಿದ್ದವು, ಆಡಳಿತ ಯಂತ್ರವನ್ನು ಎಚ್ಚರಿಸಿದ್ದವು, ಒಂದಿಷ್ಟು ಮಂದಿಗೆ ನೆರವಾಗಿದ್ದವು, ಯಾರೆಂದೂ ತಿಳಿಯದ ವ್ಯಕ್ತಿಗಳು ಕೃತಜ್ಞತೆ ಸಲ್ಲಿಸಿ ನಡೆದಾಗ ನಮ್ಮಲ್ಲೂ ಒಂದು ಸಾರ್ಥಕ್ಯ ಭಾವ ಮೂಡಿಸಿದ್ದವು.



ಹೇಳಿಕೇಳಿ ನಮ್ಮದೊಂದು ಪುಟ್ಟ ತಂಡ. ನಮ್ಮದೇ ಮಿತಿಯಲ್ಲಿ ಕೆಲಸ ಮಾಡಬೇಕಾದ ಅನಿವಾರ್ಯತೆ. ಆದರೆ ಎಂದಿಗೂ ಕಂಟೆಂಟ್ ಕ್ವಾಲಿಟಿಯಲ್ಲಿ ರಾಜಿಮಾಡಿಕೊಂಡಿಲ್ಲ. ವೈಯಕ್ತಿಕ ಅಭಿಪ್ರಾಯನ್ನು ಹೇರಿಲ್ಲ ಮತ್ತು ಪತ್ರಿಕೋದ್ಯಮದ ಶಿಸ್ತನ್ನು ಮೀರಿ ನಡೆದಿಲ್ಲ. ನೊಂದವರ ಧ್ವನಿಯಾಗುತ್ತಲೇ ಬಂದಿದ್ದೇವೆ. ಮನುಷ್ಯತ್ವವೇ ಮೇಲು ಎಂಬ ಸಿದ್ಧಾಂತಕ್ಕೆ ಬದ್ಧರಾಗಿಯೇ ನಡೆದಿದ್ದೇವೆ. ನಿಖರ ಮಾಹಿತಿಯ ಸೇತುವಾಗಿದ್ದೇವೆ. ಅಷ್ಟರ ಮಟ್ಟಿಗೆ ಆತ್ಮತೃಪ್ತಿ ಇದೆ. ಅಲ್ಲಲ್ಲಿ ತಿಳಿಯದ ತಪ್ಪುಗಳು ಆಗಿದೆ. ತಿದ್ದಿಕೊಂಡಿದ್ದೇವೆ. ಸಾಕಷ್ಟು ಕಲಿಯುತ್ತಿದ್ದೇವೆ.

ಯಾರದೋ ಮೂಗಿನ ನೇರಕ್ಕೆ ನಾವಿಲ್ಲ ಎಂಬ ಕಾರಣಕ್ಕೆ, ವಸ್ತುನಿಷ್ಠವಾಗಿ ಇರುವುದಕ್ಕೆ ನನ್ನನ್ನು, ನಮ್ಮ ಬಳಗವನ್ನೂ ದೂಷಿಸಿದ್ದಾರೆ, ಕಾಲೆಳೆದಿದ್ದಾರೆ, ಅವಕಾಶಗಳನ್ನು ತಪ್ಪಿಸಿದ್ದಾರೆ, ಬೆದರಿಕೆ ಹಾಕುವ, ತೇಜೋವಧೆ ಮಾಡುವ ಪ್ರಯತ್ನ ಮಾಡಿದ್ದಾರೆ. ಅಂತೆ-ಕಂತೆಯ ಕಥೆ ಕಟ್ಟಿ ತೇಲಿಬಿಡುತ್ತಲೂ ಇದ್ದಾರೆ. ಈ ಕ್ಷೇತ್ರವೇ ಹಾಗೆ ಎಂಬ ಅರಿವಿರುವುದರಿಂದ ಇಂದಿಗೂ ನಡೆಯುತ್ತಿರುವ ಆ ಎಲ್ಲಾ ಕಸರತ್ತುಗಳನ್ನು ಕಡೆಗಣಿಸುತ್ತಲೇ, ನಾವು ನಮ್ಮ ಕರ್ತವ್ಯವನ್ನಷ್ಟೇ ಮಾಡುತ್ತಾ ಬಂದಿದ್ದೇವೆ. ಇಲ್ಲಿ ಯಾರೊಂದಿಗೂ ಸ್ವರ್ಧೆಗೆ ನಿಂತಿಲ್ಲ. ಜಿದ್ದಿಗಿಳಿಯುವಷ್ಟು ಸಮಯವೂ ನಮ್ಮಲ್ಲಿಲ್ಲ.

ಅಂದ ಹಾಗೆ, ಕುಂದಾಪ್ರ ಡಾಟ್ ಕಾಂ ಆರಂಭಿಸಿದ್ದನ್ನು ನಿಮಗೆ ಹೇಳಲೇಬೇಕು. ಅದು ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಬಿಬಿಎಂ ಪದವಿ ಕಲಿಯುತ್ತಿದ್ದ ದಿನಗಳು. ಓದು ಸಾಹಿತ್ಯ ಅಂತ ಓಡಾಡಿಕೊಂಡಿದ್ದಾಗ ಕಾಲೇಜಿನಲ್ಲಿ ಪತ್ರಿಕೆ ಆರಂಭಿಸಬೇಕು ಎಂಬ ಆಲೋಚನೆ ಹುಟ್ಟಿಕೊಂಡಿತು. ಅಂದಿನ ಪ್ರಾಂಶುಪಾಲರ ಬಳಿ ಮಾತನಾಡಿದೆ. ನನ್ನ ಉದ್ದೇಶದ ಪೂರ್ವಾಪರವನ್ನು ಅವರಿಗೆ ಸಂಪೂರ್ಣ ತಿಳಿಸದೇ ಇದ್ದಿದ್ದರಿಂದಲೋ ಅಥವಾಕಾಲೇಜಿನ ಆಡಳಿತಾತ್ಮಕ ಮೀತಿಯನ್ನು ಅವರು ಮೀರುವುದು ಸಾಧ್ಯವಾಗದಕ್ಕೋ ಏನೋ ಪತ್ರಿಕೆ ಬೇಡ ಎಂದರು. ಕೆಲ ಸಮಯದ ಬಳಿಕ ಮಣಿಪಾಲ ಆಡಳಿತಾಧಿಕಾರಿಗೆ ಸಂದೇಶ ಹೋಯಿತು. ಮತ್ತೆ ಪ್ರಾಂಶುಪಾಲರು ಕಛೇರಿಗೆ ಕರೆಸಿಕೊಂಡರು. ಆ ಸಂದರ್ಭ ನನ್ನ ನಿಲುವು ಬದಲಾಗಿತ್ತು. ಕಾಲೇಜಿನಲ್ಲಿ ಬರವಣಿಗೆಯ ಆಸಕ್ತಿಯಿದ್ದ ಗೆಳೆಯರೊಂದಿಗೆ ಸೇರಿ ‘ಬಿಸಿಕೆ ಬಿಂಬ’ ಎಂಬ ಬ್ಲಾಗ್ ಆರಂಭಿಸಿಯಾಗಿತ್ತು. ಒಂದಿಷ್ಟು ಕಥೆ, ಕವನ, ಲೇಖನಗಳು ಪ್ರಕಟವಾಗಿದ್ದವು. ಕಾಲೇಜು ಮುಗಿಯುತ್ತಾ ಬಂದಿತ್ತು. ಮುಂದೇನು ಎಂಬ ಯೋಜನೆ ಎದುರಾದಾಗ ‘ಕುಂದಾಪ್ರ ಡಾಟ್ ಕಾಂ’ ಕನಸು ಚಿಗುರೊಡೆಯಿತು.

2012 ಮಾರ್ಚ್ 30ರಂದು ಭಂಡಾರ್ಕಾರ್ಸ್ ಕಾಲೇಜಿನ ಆರ್.ಎನ್. ಶೆಟ್ಟಿ ಸಭಾಂಗಣದಲ್ಲಿಯೇ ‘ಕುಂದಾಪ್ರ ಡಾಟ್ ಕಾಂ’ ಆರಂಭಗೊಂಡದ್ದು. ಅದೊಂದು ತೀರಾ ಖಾಸಗಿ ಕಾರ್ಯಕ್ರಮ ಆದರೆ ಕಾಲೇಜಿನದೇ ಕಾರ್ಯಕ್ರಮ ಎಂಬ ಮಟ್ಟಿಗೆ ಸಹಕಾರ ದೊರಕಿತ್ತು. ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಆಡಳಿತಾಧಿಕಾರಿ ಡಾ. ಎಚ್. ಶಾಂತಾರಾಮ ಅವರು ‘ಕುಂದಾಪ್ರ ಡಾಟ್ ಕಾಂ’ ಲೋಕಾರ್ಪಣೆ ಮಾಡಿದ್ದರು. ಪ್ರೀತಿಯ ಎ.ಎಸ್.ಎನ್ ಹೆಬ್ಬಾರರು, ಆತ್ಮೀಯ ಓಂಗಣೇಶ್ ಉಪ್ಪುಂದ ಅವರು, ಕಾಲೇಜು ದಿನಗಳಲ್ಲಿ ನನ್ನನ್ನು ತಿದ್ದುತ್ತಲೇ ಬಂದಿದ್ದ ಪ್ರಾಂಶುಪಾಲರಾಗಿದ್ದ ದೋಮ ಚಂದ್ರಶೇಖರ್ ಸರ್ ಇಷ್ಟೇ ಮಂದಿ ಅತಿಥಿ. ಸರಳ ಕಾರ್ಯಕ್ರಮ ನಡೆದಿತ್ತು. ನನ್ನ ಒಂದಿಷ್ಟು ಮಂದಿ ಸ್ನೇಹಿತರು ಈ ಎಲ್ಲದಕ್ಕೂ ಜೊತೆಯಾಗಿ ನಿಂತಿದ್ದರು. ಇವರೊಂದಿಗೆ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥೆಯಾಗಿದ್ದ ಸುಮಲತಾ ಮೇಡಂ, ಲೈಬ್ರರಿಯನ್ ಆನಂದ ಸರ್, ಮ್ಯಾನೆಜರ್ ವಿಠಲ್ ಅಣ್ಣ ಅವರ ಪ್ರೋತ್ಸಾಹ ಮರೆಯಲಾಗದ್ದು. ಲೋಕಾರ್ಪಣೆಯ ಸಂದರ್ಭದಲ್ಲಿ ಸಹಕರಿಸಿದ್ದ ಚೈತ್ರಾ ಪಡುಕೋಣೆ, ರಾಯ್ಟನ್ ಪಿಂಟೋ, ಪ್ರಜ್ವಲಾ, ಪ್ರವೀಣ ಶೆಟ್ಟಿ, ಅಶ್ವಿತಾ ಶೆಟ್ಟಿ, ಸಂಜಯ ಕಿಣಿ, ರಶ್ಮಿತಾ, ದಿಕ್ಷಾ ಹೆಗ್ಡೆ ಹರ್ಕೂರು, ರವಿನಾ ಕುಮಾರಿ, ಮನೋಜ್, ನಕ್ಷತ್ರ, ರವಿಕಿರಣ್ ಹಾಗೂ ಅನೇಕ ಆತ್ಮೀಯರು, ಆರಂಭದಲ್ಲಿ ತಾಂತ್ರಿಕ ಸಹಕಾರ ನೀಡಿದ್ದ ಗೌತಮ್ ನಾವಡ ಹಾಗೂ ಆ ಬಳಿಕ ದಿನೇಶ್ ಹೊಳ್ಳರು, ಅಭಿನವ್ ಶೆಟ್ಟಿ ಹೀಗೆ ನೆರವಾದವರ ದೊಡ್ಡ ಪಟ್ಟಿಯೇ ಇದೆ. ಈವರೆಗೂ ಅಂಕಣ ಲೇಖನ ಬರೆದ ಹತ್ತಾರು ಸಹೃದಯಿಗಳ ಪ್ರೋತ್ಸಾಹ ಮರೆಯಲಾಗದ್ದು.

‘ಕುಂದಾಪ್ರ ಡಾಟ್ ಕಾಂ’ ಎಂಬುದೊಂದು ನಿಲ್ಲದ ಪ್ರಕ್ರಿಯೆ, ಆಂದೋಲನ. ಸಾಗುತ್ತಲೇ ಎಲ್ಲವನ್ನೂ ಒಳಗೊಳ್ಳುವುದು, ಜನರ ಧ್ವನಿಯಾಗುವುದು, ಕುಂದನಾಡನ್ನು ಪ್ರತಿನಿಧಿಸುತ್ತಾ ನೆಲದ ಭಾಷೆ, ಸಂಸ್ಕೃತಿ, ಕಲೆ, ಸಾಹಿತ್ಯದ ಘಮವನ್ನು ಜಗತ್ತಿಗೆ ಉಣಬಡಿಸುವುದು… ಹೀಗೆ ಎಲ್ಲವೂ ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಸದ್ಯದಲ್ಲೇ ಹೊಸ ವಿನ್ಯಾಸದೊಂದಿಗೆ ಬರಲಿದ್ದೇವೆ. ನಿಮ್ಮಗಳ ಪ್ರೋತ್ಸಾಹ ಬೇಕಷ್ಟೇ.


  • ಸುನಿಲ್ ಹೆಚ್. ಜಿ. ಬೈಂದೂರು



0 comments:

Post a Comment

 
Design by KMN