ಇಂದಿನ ಶಿಕ್ಷಣ ವಿದ್ಯಾರ್ಥಿಗಳನ್ನು ಪರಿಪೂರ್ಣರನ್ನಾಗಿಸುತ್ತಿದೆಯೇ...?

ಶಿಕ್ಷಣವೆಂದರೆ ಸತ್ಯದ ಹುಡುಕಾಟ. ಅದು ಸಾಮಾಜಿಕ ಸ್ವಾತಂತ್ರ್ಯವನ್ನು ನೀಡುವ ಪ್ರಮುಖ ಸಾಧನ. ಸಂಸ್ಕಾರ ಸಾಧನೆಯ ಮಾರ್ಗ. ಶಿಕ್ಷಣ ವ್ಯಕ್ತಿಯೊಬ್ಬನ ಅಂತರಂಗದ ಅರಿವನ್ನು, ಬಹಿರಂಗದ ಪರಿಜ್ಞಾನವನ್ನು ಕ್ರೋಢಿಕರಿಸಿ ಆತನಲ್ಲೊಂದು ಪರಿಪೂರ್ಣತೆಯನ್ನು ತುಂಬಿಕೊಡುವ ಪ್ರಕ್ರಿಯೆಯಾಗಿದೆ.
   ಶಿಕ್ಷಣ ವಿದ್ಯಾರ್ಥಿಯೊಬ್ಬನಿಗೆ ತನ್ನ ಶಕ್ತಿ-ಆಸಕ್ತಿ, ಇತಿ-ಮಿತಿಗಳನ್ನು ಅರಿತುಕೊಳ್ಳುವ ಸಂಸ್ಕಾರ ನೀಡಬೇಕು. ಅಜ್ಞಾನವೆಂಬ ಮುಸುಕಿನಿಂದ ಬೆಳಕಿನಡೆಗೆ, ಲೌಕಿಕತೆಯಿಂದ ಅಲೌಕಿಕತೆಯೆಡೆಗೆ ಆತನನ್ನು ಮುನ್ನಡೆಸುವಂತಿರಬೇಕು. ಆಗಲೇ ಅದರ ನಿಜವಾದ ಉದ್ದೇಶ ಪರಿಪೂರ್ಣಗೊಳ್ಳುವುದು.
     ಆದರೆ ಇಂದು ಶಿಕ್ಷಣದ ಉದ್ದೇಶ ಅದೆಷ್ಟರ ಮಟ್ಟಿಗೆ ಸಫಲಗೊಂಡಿದೆ? ಅದೆಷ್ಟು ಶಿಕ್ಷಣ ಸಂಸ್ಥೆಗಳು ಮೂಲ ಧ್ಯೇಯದೊಂದಿಗೆ ತಮ್ಮ ಅಸ್ತಿತ್ವನ್ನು ಕಾಯ್ದುಕೊಂಡು ವಿದ್ಯಾರ್ಥಿಗಳನ್ನು ಪರಿಪೂರ್ಣರನ್ನಾಗಿಸಿದೆ? ಬೆರಳೆಣಿಕೆಯಷ್ಟಿರಬಹುದು! ಬದುಕಿನ ಮೂಲಭೂತ ಮೌಲ್ಯಗಳಿಗೆ ಒತ್ತುಕೊಡದೆ; ವಿದ್ಯಾರ್ಥಿಯ ವ್ಯಕ್ತಿತ್ವ, ಒಲವು, ವೈಶಿಷ್ಟ್ಯಗಳನ್ನು ಅರ್ಥಮಾಡಿಕೊಳ್ಳದೆ; ಲೋಕಜ್ಞಾನ, ಮಾಹಿತಿ ಸಂಗ್ರಹಗಳತ್ತ ಮಾತ್ರ ಚಿತ್ತ ಹರಿಸಿ ಎಲ್ಲರಿಗೂ ಒಂದೇ ತೆರನಾದ ಮಾಹಿತಿಯನ್ನು, ಹೊಸ ಹೊಸ ಸಂಗತಿಗಳನ್ನು ತುರುಕಿ ಬುದ್ಧಿವಂತರನ್ನಾಗಿ ಮಾಡುವ ಪ್ರಕ್ರಿಯೆ ಮಾತ್ರ ನಿಲ್ಲದೆ ಸಾಗಿದೆ.
    ವಿದ್ಯಾರ್ಥಿ ತಲೆಯನ್ನು ಖಾಲಿ ಪೆಟ್ಟಿಗೆಯೆಂದು ಭಾವಿಸಿ ಪುಸ್ತಕದೊಳಗಿನ ವಿಷಯವನ್ನು ತುಂಬಿದರೆ ಅವನು ಬುದ್ಧಿವಂತನಾಗಬಹುದು, ಜ್ಞಾನವನ್ನು ಹೊಂದಬಹುದು ಆದರೆ ಈ  ಪ್ರಕ್ರಿಯೆಯೊಳಗೆ ಆತ ಉತ್ತಮ ಸಂಸ್ಕಾರವನ್ನು ಹೊಂದಲು ಸಾಧ್ಯವೇ? ನೈತಿಕತೆ, ಸಾಮಾಜಿಕ ಜವಾಬ್ದಾರಿ, ರಾಷ್ಟ್ರೀಯ ಪ್ರಜ್ಞೆಗಳು ಮೊಳಕೆಯೊಡೆಯಲು ಸಾಧ್ಯವೆ? ಅಂತರಂಗದಲ್ಲಿ ಮೂಡುವ ಅಲೌಕಿಕ ಅಂಧಕಾರದಿಂದ ವ್ಯಕ್ತಿ ಕಂಗೆಟ್ಟು ಅಶಾಂತಿ ಅಸಮಾಧಾನ, ಸಂಘರ್ಷಗಳು ನಡೆಯದೇ ಇರದೆ?
         ಪರಿಪೂರ್ಣ ವ್ಯಕ್ತಿತ್ವವನ್ನು ಕಟ್ಟಿಕೊಡಬಲ್ಲ ಜೀವನ ಮೌಲ್ಯಗಳ ಮೇಲಿನ ಶ್ರದ್ಧೆ-ನಂಬಿಕೆಗಳಿಂದ ಅಂಧಕಾರ ದೂರ ಸರಿಯುವುದೆಂಬುದು ತಿಳಿದವರ ಮಾತು. ಇಂದು ಅದಕ್ಕೆ ಪೂರಕವಾದ ಶಿಕ್ಷಣ ವ್ಯವಸ್ಥೆಯ ಅನಿವಾರ್ಯತೆ ಇದೆ. ಶಿಕ್ಷಣವನ್ನು ವ್ಯವಹಾರವನ್ನಾಗಿಸಿಕೊಂಡು ದುಡ್ಡು ಮಾಡಲು ಹೋರಟಿರುವ ಶಿಕ್ಷಣ ಸಂಸ್ಥೆಗಳು ಒಮ್ಮೆ ತಮ್ಮ ಸಾಮಾಜಿಕ ಜವಾಬ್ದಾರಿ; ನೈತಿಕ ಹೊಣೆಗಾರಿಕೆಯನ್ನು ಅವಲೋಕಿಸಿಕೊಂಡು ಮುನ್ನಡೆಯುವುದು ಒಳಿತು. 

4 comments:

Anonymous said...

Good article

Anonymous said...

it make me to think. nice

Anonymous said...

awesome for 10 std. projects

Anonymous said...

cool made me think........

Post a Comment

 
Design by KMN