ಕಳೆದ ದಿನಗಳ ಪರಾಮರ್ಶಿಸಿ ಹೊಸ ಬದುಕನ್ನು ಕಟ್ಟಿಕೊಳ್ಳುವ.

         ರಳಿ ಬಂದಿದೆ ಹೊಸವರುಷ. ತಂದಿದೆ ನವ ಹರುಷ. ಹೊಸ ಕನಸು, ಹೊಸ ನಿರೀಕ್ಷೆ, ತವಕ-ತಲ್ಲಣಗಳ ಮೂಟೆಯನ್ನೇ ಹೊತ್ತು ಹೊಸ ವರ್ಷವನ್ನು ಬರಮಾಡಿಕೊಂಡಿದ್ದೇವೆ. ಈ ಸುಸಂದರ್ಭದಲ್ಲಿಯೇ  ಕಳೆದ ದಿನಗಳನ್ನು ಪರಾಮರ್ಶಿಸುವ, ಓರೆಗೆ ಹಚ್ಚುವ, ಮುಂದಿನ ಯೋಜನೆಗಳ ಕುರಿತು ಗಮನ ಹರಿಸುವ, ಸೂಕ್ತವೆನಿಸಿದ್ದನ್ನು ಕಾರ್ಯರೂಪಕ್ಕಿಳಿಸುವ ಕೆಲಸವನ್ನು ನಮ್ಮಿಂದಾಗಬೇಕಿದೆ.
     ದಿನಗಳುರುಳಿದಂತೆ ಆಯುಷ್ಯವೂ ಕ್ಷೀಣಿಸುತ್ತಾ ಹೋಗುತ್ತಿವೆ. ವಿಪರ್ಯಾಸವೊ ಎಂಬಂತೆ ಕಡಿಮೆಯಾಗುವ ಆಯುಷ್ಯದೊಂದಿಗೆ ಆಸೆಗಳು ಮಾತ್ರ ಹೆಚ್ಚುತ್ತಿವೆ. ಒಂದರ ಹಿಂದೆ ಮತ್ತೊಂದರಂತೆ ಮಿತಿಇಲ್ಲದೆ ಬೆಳೆಯುವ ಆಸೆಗಳ ಪಟ್ಟಿಯನ್ನು ಪೂರೈಸಿಕೊಳ್ಳುದರಲ್ಲಿಯೇ ಬದುಕು ಮುಗಿಯುದೆನೋ ಎಂದು ಭಾಸವಾಗುತ್ತಿದೆ. ಆ ನಡುವೊಂದಿಷ್ಟು ಸಾಧನೆ, ಸಹವಾಸ, ಹೆಸರಿಲ್ಲದ ನೂರಾರು ಕೆಲಸಗಳು ಇವೆಲ್ಲಾ ಬದುಕು ಇಷ್ಟೇ ಅಲ್ಲ ಸಾಧಿಸುವುದು ಬಹಳಷ್ಡಿದೆ ಎಂದು ಸಾರಿ ಹೇಳುತ್ತವೆ.

      ಪ್ರಪಂಚ ಆಧುನಿಕತೆಯನ್ನು ತುಂಬಿಕೊಂಡು ಬೀಗಿದಂತೆ ಮರೆಯಾಗಬೇಕಿದ್ದ ಸಮಾಜದ ಅನಿಷ್ಟಗಳು ಹೊಸ ಹೊಸ ರೂಪದಲ್ಲಿ ಮತ್ತೆ ನಮ್ಮನ್ನು ತಳುಕು ಹಾಕಿಕೊಳ್ಳುತ್ತಿವೆ. ನಾಗರೀಕ ಸಮಾಜದಲ್ಲಿ ಬದುಕುತ್ತಿದ್ದೇವೆ ಎಂದು ಹೇಳುವ  ಇನ್ನೊಂದು ಮಗ್ಗುಲಲ್ಲೇ ಅನಾಗರೀಕತೆ ತಾಂಡವಾಡುತ್ತಿದೆ. ಜೀವನ ಮೌಲ್ಯಗಳೆಂಬುದು ಉಪನ್ಯಾಸದ ವಿಷಯಗಳಾಗಿವೆಯೇ ಹೊರತು ಬದುಕಿನ ಭಾಗವಾಗಿಲ್ಲ. ಆದರ್ಶಪ್ರಾಯರನ್ನು ಹುಡುಕಿ ಹೊರಟಿದ್ದೇವೆಯೇ ಹೊರತು ನಮ್ಮಲ್ಲೊಂದು ಆದರ್ಶವನ್ನು ಗಟ್ಟಿಗೊಳಿಸಿಕೊಂಡಿಲ್ಲ. ಸಂಬಂಧಗಳ ಅಳಿವು ಉಳಿವುಗಳು ಬ್ರೇಕಿಂಗ್ ನ್ಯೂಸ್ಗಳಿಗಿಂತ ವೇಗವಾಗಿ ನಿರ್ಧರಿತಗೊಂಡು ಇತರರನ್ನು ತಲುಪಿ ಹರಟೆಯ ವಸ್ತುಗಳಾಗುತ್ತಿವೆ. ದೇಶವನ್ನು ಮುನ್ನಡೆಸಬೇಕಾದ ಯುವಶಕ್ತಿ ಕಾಲ-ಜ್ಷಾನಗಳ ಪರಿವೇ ಇಲ್ಲದಂತೆ ಇನ್ನೆಲ್ಲೋ ಮುಳುಗಿಹೋಗುತ್ತಿದ್ದಾರೆ. ಯಂತ್ರದ ತೆಕ್ಕೆಯೊಳಗೆ ಸಿಕ್ಕಿ ಒದ್ದಾಡುವ ಬದುಕು ನಮ್ಮದಾಗುತ್ತಿದೆ. ಸಮಾಜದ ಪರಿವರ್ತಕರೆನಿಕೊಂಡವರೆಲ್ಲರೂ ಮಲಗಿ ನಿದ್ರಿಸುತ್ತಿದ್ದಾರೆ, ದೇಶ ದೊಚುತ್ತಿದ್ದಾರೆ. ನಡುರಾತ್ರಿಯ ಸ್ವಾತಂತ್ರ್ಯ ಇನ್ನು ಹಲವು ವರ್ಗದವರಿಗೆ ಬೆಳಕು ತಂದುಕೊಟ್ಟಿಲ್ಲ. 
        ಹೌದು. ಖಂಡಿತವಾಗಿಯೂ ಚಿಂತಿಸುವ, ಚಿಂತಿಸಿದನ್ನು ಓರೆಗೆ ಹಚ್ಚುವ ಅಗತ್ಯವಿದೆ. ಸಕಾರಾತ್ಮಕ ಬೆಳವಣಿಗೆಯನ್ನು ಕಂಡುಕೊಂಡು ಹೊಸ ವರ್ಷಕ್ಕೊಂದು ಹೊಸ ಅರ್ಥ ನೀಡಬೆಕಿದೆ.

      ಭ್ರಷ್ಟಾಚಾರ, ವಿವಾದಗಳು, ದರ್ಘಟನೆಗಳು, ಜನಾಂಗಿಯ ಹಿಂಸೆ, ಸಾಮಾಜಿಕ ದುಷ್ಕ್ರತ್ಯಗಳೇ ವಿಜ್ರಂಭಿಸಿದ ದಿನಗಳಿಗೆ ಮಂಗಳ ಹಾಡಿ ಎಲ್ಲರನ್ನೂ ನಮ್ಮಂತೆಯೇ ಕಾಣುವ, ಮಾನವೀಯ ಮೌಲ್ಯವನ್ನು ಮೇರೆಯುವ, ಸಧೃಡ, ಸ್ವಸ್ಥ ಸಮಾಜವನ್ನು ಕಟ್ಟುವತ್ತ ಕಾರ್ಯೋನ್ಮುಖರಾಗುವ...
             ಹೊಸ ವರ್ಷ ಎಲ್ಲರ ಬದುಕಿನಲ್ಲೂ ಆಶಾದಾಯವಾಗಲಿ. ಶುಭವನ್ನು ತರಲಿ.             
 ಹೊಸ ವರ್ಷದ ಶುಭಾಶಯಗಳು.

                                                                                          

0 comments:

Post a Comment

 
Design by KMN